ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಪುತ್ತೂರು:ರೈತರ ಬದುಕಿನೊಂದಿಗೆ ಆಟವಾಡುತ್ತಿರುವ ಬಿಜೆಪಿ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ

ಪುತ್ತೂರು:ರೈತರ ಬದುಕಿನೊಂದಿಗೆ ಆಟವಾಡುತ್ತಿರುವ ಬಿಜೆಪಿ: ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ

Tue, 15 Dec 2009 03:18:00  Office Staff   S.O. News Service
ಪುತ್ತೂರು, ಡಿ.14:  ಸ್ವಾರ್ಥ ರಾಜಕಾರಣದ ಮೂಲಕ ರೈತರ ಬದುಕಿನೊಂದಿಗೆ ಆಟವಾಡುತ್ತಿರುವ ರಾಜ್ಯದ ಬಿಜೆಪಿ ಸರಕಾರ ರೈತ-ಜನವಿರೋಧಿ ಡಳಿತ ನಡೆಸುತ್ತಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಆರೋಪಿಸಿದ್ದಾರೆ.

ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪುತ್ತೂರು ತಾಲೂಕು ಕಚೇರಿಯ ಎದುರು ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ಹಮ್ಮಿಕೊಳ್ಲಾಗಿದ್ದ  ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು.

ದಿನಸಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಪಡಿತರ ಚೀಟಿಯಲ್ಲಿ ಗೊಂದಲ ಇನ್ನೂ ಮುಗಿದಿಲ್ಲ. ೨ ರೂ.ಗೆ ಅಕ್ಕಿ ಕೊಡುವುದಾಗಿ ಘೋಷಿಸಿದ ಸರಕಾರ ಈ ಬಗ್ಗೆ ಮಾತೂ ಆಡುತ್ತಿಲ್ಲ. ರೈತರ ಬದುಕು ನಿರ್ನಾಮ ಮಾಡಲು ಹೊರಟ, ರಾಜ್ಯ ಕಂಡ ಅತ್ಯಂತ ದರಿದ್ರ ಸರಕಾರ ಇದಾಗಿದೆ ಎಂದವರು  ಹೇಳಿದರು.

ಅಡಿಕೆಗೆ ಬೆಂಬಲ ಬೆಲೆ ಘೋಷಿಸುವಂತೆ ಮಾಡಲು ಜಿಲ್ಲೆಯ ಲೋಕಸಭಾ ಸದಸ್ಯ, ಶಾಸಕರಿಂದ ಇದುವರೆಗೆ ಸಾಧ್ಯವಾಗಿಲ್ಲ ಇವರೆಂಥಾ ಜನಪ್ರತಿನಿಧಿಗಳು ಎಂನ್ನುವುದನ್ನು ಸ್ಪಷ್ಟಪಡಿಸಿದೆ. ಸಮಸ್ಯೆ ಬಂದಾಗ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಲು ಮಾತ್ರ ಇವರಿಗೆ ಗೊತ್ತಿದೆ ಎಂದವರು ಹೇಳಿದರು. 

ಜಿಲ್ಲಾ ಕಾಂಗ್ರೆಸ್ ಸಮಿತಿಯ ಎ. ಜೀವನ್ ಭಂಡಾರಿ ಮಾತನಾಡಿ, ಜಿಲ್ಲಾಧಿಕಾರಿಯ ಕೈಯಲ್ಲಿ ಲಾಠಿ ಕೊಟ್ಟು ರೈತರ ನಿರ್ನಾಮಕ್ಕೆ ಹೊರಟಿರುವ ಬಿಜೆಪಿ ಸರಕಾರ ಖನಿಜ ಸಂಪತ್ತು ಲೂಟಿ ಮಾಡುವ ಲೂಟಿಕೋರರ ಸರಕಾರವಾಗಿದೆ. ಅಡಿಕೆಗೆ ಕೊಳೆ ರೋಗ ಬಂದಾಗ ಆಗಿನ ಸಂಸದ ಡಿ.ವಿ. ಸದಾನಂದ ಗೌಡರ ನೇತೃತ್ವದಲ್ಲಿ ಹೋದ ಜನತೆಗೆ ೧೦ ಕೋಟಿ ರೂ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿ ದ್ದರು. ಇದು ಎಲ್ಲಿದೆ? ಎಂದು ಪ್ರಶ್ನಿಸಿದರು. ಉದ್ಯಮಿಗಳಿಗೆ ಕಣ್ಣುಮುಚ್ಚಿ ನೆರವು ನೀಡುವ ಈ ರಾಜ್ಯ ಸರಕಾರ ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈತರ ಗೋರಿ ನಿಲ್ಲಿಸುತ್ತಿದೆ. ಅಡಿಕೆ ಬೆಳೆಯುವ ರೈತರು ಕೋಟಿಗಟ್ಟಲೆ ತೆರಿಗೆಯನ್ನು ಸರಕಾರಕ್ಕೆ ನೀಡುತ್ತಿದ್ದರು. ಅವರಿಗೆ ಯಾವುದೇ ಸೌಲಭ್ಯ ನೀಡಲು ಮುಂದಾಗದೆ ನಿದ್ರೆ ಬಂದಂತೆ ನಟಿಸುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹಮ್ಮದ್, ಸುಳ್ಯದ ಯುವಕ ಕಾಂಗ್ರೆಸ್ ಮುಖಂಡ, ನ್ಯಾಯವಾದಿ ವೆಂಕಪ್ಪ ಗೌಡ, ಉಸ್ತುವಾರಿ ನಿತ್ಯಾನಂದ ಮುಂಡೋಡಿ, ತಾ.ಪಂ. ಸದಸ್ಯ ಅಬ್ದುಲ್ ರಹಮಾನ್ ಅರ್ತಿಕೆರೆ, ಪುರಸಭಾ ಸದಸ್ಯರಾದ ಎಚ್.ಮಹಮ್ಮದಾಲಿ, ಲ್ಯಾನ್ಸಿ ಮಸ್ಕರೇನಸ್, ಶಕ್ತಿ ಸಿನ್ಹಾ, ಕಾಂಗ್ರೆಸ್ ಮುಖಂಡ ಅಮ್ಮಣ್ಣ ರೈ, ಚಿದಾನಂದ ಬೈಲಾಡಿ, ಕೇಶವ ಪೂಜಾರಿ, ಕಿಟ್ಟಣ್ಣ ಗೌಡ, ದುರ್ಗಾಪ್ರಸಾದ್ ರೈ, ತುಂಬ್ರ ಮೊದಲಾದವರು ಮಾತನಾಡಿದರು.

Share: